ಥಾಯ್ ಸಾಹಿತ್ಯ 

ಥಾಯ್ ಭಾಷೆಯ ವಿವಿಧ ಪ್ರಕಾರಗಳಿಗೆ ಸೇರಿದ ಥಾಯ್ ಸಾಹಿತ್ಯದ ಅತ್ಯುತ್ತಮ ಕೃತಿಗಳನ್ನು ಆರಿಸಲೆಂದು, ಮೊದಲಿಗೆ ರಾಯಲ್ ಇನ್‍ಸ್ಟಿಟ್ಯೂಟ್ ಎಂದು ಕರೆಯಲಾಗಿತ್ತಿದ್ದ ಆದರೆ ಇಂದು ಲಲಿತಕಲೆಗಳ ವಿಭಾಗವೆಂದು ಹೆಸರಿಸಲಾಗಿರುವ ಸಂಸ್ಥೆ 1914ರಲ್ಲಿ ತಜ್ಞರ ಸಮಿತಿಯೊಂದನ್ನು ನೇಮಿಸಿತು. ಸಮಿತಿಯ ಆಯ್ಕೆ ಹೀಗಿತ್ತು. ಫ್ರ ಲವ್, ಫ್ರ ಸಮುತ್ಥ ಖೊತ್, ಮಹಛತ್ ಖಮ್, ಥೆತ್, ಖುನ್ ಛಂಗ್ ಖುನ್ ಫಎನ್, ಇನ್‍ಒ, ಹು ಅವೈ ನಕ್ರೋಪ್, ಸಮ್ ಕೊಕ್, ಫ ರಾಜಫಿಥಿ, ಸಿಪ್ಯೊಂಗ್ ದುಅನ್. ಬಹುಶಃ ಅವುಗಳ ಭಾಷಿಕ ಸೌಂದರ್ಯ ಹಾಗೂ ಭಾವನಾಮೌಲ್ಯಗಳಿಗಾಗಿ ಅವುಗಳನ್ನು ಆಯಲಾಗಿತ್ತು.

ಫ್ರ ಲವ್ ಎಂಬುದು ಉತ್ತರ ಥೈಲೆಂಡಿನ ಸಣ್ಣ ರಾಜ್ಯವೊಂದರ ರಾಜನ ಪ್ರಣಯ ಕಥೆಯನ್ನು ನಿರೂಪಿಸುತ್ತದೆ. ಅವನು ತರುಣನೂ ತುಂಬ ಸುಂದರನೂ ಆಗಿದ್ದ. ಆದರೆ ಅವನು ವಿವಾಹಿತನಾಗಿದ್ದ. ಲಾವಣಿಕಾರರ ಮುಖಾಂತರವಾಗಿ ಅವನ ಸೌಂದರ್ಯದ ಕೀರ್ತಿ ನೆರೆಯ ನಾಡಿನ ಇಬ್ಬರು ಸುಂದರಿಯರಾದ ರಾಜಕುಮಾರಿಯರ ಕಿವಿಗೂ ಬಿದ್ದಿತು. ಫ್ರ ಲವ್‍ನ ತಂದೆ ಯುದ್ಧದಲ್ಲಿ ಈ ರಾಜಕುಮಾರಿಯರ ತಾತನನ್ನು ಕೊಂದಿದ್ದ. ಲಾವಣಿಕಾರ ಚಿತ್ರಿಸಿದ ಫ್ರ ಲವ್‍ನ ಅದ್ಭುತ ಸೌಂದರ್ಯದಿಂದ ಆಕರ್ಷಿತರಾದ ಈ ಇಬ್ಬರು ರಾಜಕುಮಾರಿಯರು ಮೋಹದಿಂದ ಹುಚ್ಚಾದರು. ತಮ್ಮ ವಿಶ್ವಾಸಕ್ಕೆ ಪಾತ್ರರಾಗಿದ್ದ ಇಬ್ಬರು ಚೇಟಿಯರನ್ನು ಸಹಾಯ ಕೋರುವಂತೆ ಕಾಡಿನ ಬೇತಾಳವಾಗಿದ್ದ ಫಛಒ ಬಳಿಗೆ ಕಳುಹಿಸಿದರು. ಬೇತಾಳದ ಮಾಯೆಯಿಂದಾಗಿ ಫ್ರ ಲವ್ ಅನಿವಾರ್ಯವಾಗಿ ತನ್ನ ನಾಡಿನಿಂದ ಹೊರಬಂದ. ಅಷ್ಟೇ ಅಲ್ಲ, ಮಾಯದ ಹುಂಜವೊಂದರಿಂದ ಆಕರ್ಷಿತನಾಗಿ, ತನ್ನ ಇಬ್ಬರು ವಿಶ್ವಾಸಪಾತ್ರರಾದ ಸೇವಕರೊಡನೆ ಈ ಇಬ್ಬರು ರಾಜಕುಮಾರಿಯರ ನಾಡನ್ನು ಪ್ರವೇಶಿಸಿದ ಹಾಗೂ ರಾಜೋದ್ಯಾನವನ್ನು ಬಂದು ಸೇರಿದ. ತನ್ನ ನಾಡನ್ನು ಬಿಟ್ಟು ಹೊರಡುವ ಮೊದಲು ಫ್ರ ಲವ್ ಕೂಡ ಲಾವಣಿಕಾರರಿಂದ ಈ ಇಬ್ಬರು ರಾಜಕುಮಾರಿಯರ ಸೌಂದರ್ಯದ ಬಗ್ಗೆ ಹಾಗೂ ಅವರು ತನ್ನಲ್ಲಿ ಮೋಹಿತರಾಗಿರುವ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಆದರೆ, ಈ ಎರಡು ರಾಜ್ಯಗಳು ಪರಸ್ಪರ ಶತ್ರುರಾಷ್ಟ್ರಗಳಾಗಿದ್ದುದರಿಂದ, ಅವರನ್ನು ಮದುವೆಯಾಗುತ್ತೇನೆಂದು ಹೇಳಲು ಆತನಿಗೆ ಸಾಧ್ಯವಾಗಿರಲಿಲ್ಲ. ಮಾಯೆಯ ಸೆಳೆತಕ್ಕೆ ಒಳಗಾಗಿ, ತಿಳಿದೂ ತಿಳಿದೂ ಅವನು ತನ್ನ ನಾಡನ್ನು ಬಿಟ್ಟು ಹೊರಬಂದ, ತನ್ನ ಪತ್ನಿಯನ್ನೂ ತಾಯಿಯನ್ನೂ ಅಗಲಿ ಬರುವುದು ಹೃದಯವಿದ್ರಾವಕವಾದ ಸನ್ನಿವೇಶವಾಗಿತ್ತು. ಅವರನ್ನು ಬಿಟ್ಟು ಬಂದ ತರುವಾಯ, ತನ್ನ ಇಬ್ಬರು ವಿಶ್ವಾಸಪಾತ್ರರಾದ ಸೈನಿಕರೊಡನೆ ಶತ್ರುಗಳ ನಾಡನ್ನು ಹೊಕ್ಕಿದ್ದ. ಶತ್ರುಗಳು ಅವರನ್ನು ಗುರುತಿಸಿದರೆ ಅಪಾಯ ಕಟ್ಟಿಟ್ಟ ಗಂಟಾಗಿತ್ತು. ಒಂದು ಕಡೆ ಪ್ರೇಮ ಮತ್ತೊಂದು ಕಡೆ ವಿನಾಶದ ಬೆದರಿಕೆ ಎರಡೂ ಅವನನ್ನು ಕಾಡುತ್ತಿದ್ದುವು. ಪ್ರ ಲವ್ ಮತ್ತು ರಾಜಕುಮಾರಿಯರು ಹೇಗೋ ಭೇಟಿಯಾಗಿ ಉದ್ಯಾನದಲ್ಲಿ ರಹಸ್ಯವಾಗಿ ಪ್ರೇಮಿಸತೊಡಗಿದರು. ಈ ಪ್ರೇಮ ಪ್ರಕರಣ ಏರ್ಪಡಲು ಪ್ರಮುಖ ಕಾರಣವಾಗಿದ್ದ ಆ ಇಬ್ಬರು ವಿಶ್ವಾಸಪಾತ್ರ ಚೇಟಿಯರಲ್ಲಿ ಫ್ರಲವ್‍ನ ಇಬ್ಬರು ವಿಶ್ವಾಸಪಾತ್ರ ಸೇವಕರು ತಮ್ಮ ಪ್ರೇಮಿಕೆಯರನ್ನು ಕಂಡುಕೊಂಡರು. ರಾಜಕುಮಾರಿಯರ ಅಜ್ಜಿಗೆ ಈ ಪ್ರೇಮ ಸಮಾಗಮದ ಸುದ್ದಿ ಬಹುಬೇಗ ತಿಳಿಯಿತು. ಫ್ರ ಲವ್ ನ ತಂದೆ ತನ್ನ ಗಂಡನನ್ನು ಕೊಂದಿದ್ದನೆಂಬ ವಿಚಾರ ಅವಳ ದ್ವೇಷವನ್ನು ಹೊತ್ತಿಕ್ಕಿತು. ಅವಳು ಆ ಮೂವರನ್ನು ಕೊಲ್ಲಬೇಕೆಂದು ಸೈನಿಕರ ತಂಡವೊಂದನ್ನು ಕಳುಹಿಸಿದಳು. ಫ್ರ ಲವ್ ಮತ್ತು ಆತನ ವಿಶ್ವಾಸಪಾತ್ರ ಸೇವಕರು ಹಾಗೂ ಆ ರಾಜಕುಮಾರಿಯರು ಮತ್ತು ಅವರ ವಿಶ್ವಾಸಪಾತ್ರ ಚೇಟಿಯರು ಧೈರ್ಯದಿಂದ ಈ ಆಕ್ರಮಣವನ್ನು ಎದುರಿಸಿ ಕೊನೆಯವರೆಗೂ ಹೋರಾಡಿದರು. ಕೊನೆಗೆ ಎಲ್ಲರೂ ಕೊಲ್ಲಲ್ಪಟ್ಟರು. ರಾಜಕುಮಾರಿಯರ ತಂದೆಯಾಗಿದ್ದ ಆಗಿನ ರಾಜನಿಗೆ ಈ ದುರಂತ ಪ್ರಕರಣ ತಿಳಿದಾಗ ಅವನು ತುಂಬ ಕೋಪಗೊಂಡನು. ಅಂತಿಮ ಸಂಸ್ಕಾರಗಳ ಸುದೀರ್ಘ ವಿವರಣೆಯೊಂದಿಗೆ ಹಾಗೂ ಪರಸ್ಪರ ವಿರುದ್ಧವಾಗಿದ್ದ ಆ ಎರಡು ರಾಷ್ಟ್ರಗಳ ನಡುವೆ ಸ್ನೇಹಸಂಬಂಧ ಏರ್ಪಡುವುದರೊಂದಿಗೆ ಈ ಕಥೆ ಮುಕ್ತಾಯವಾಗುತ್ತದೆ.

ಸಂಕ್ಷಿಪ್ತವಾಗಿ ಇಲ್ಲಿ ನಿರೂಪಿಸಲಾಗಿರುವ ಫ್ರ ಲವ್‍ನ ಕಥೆಗೆ ಉತ್ತರ ಥೈಲೆಂಡಿನಲ್ಲಿ ಪ್ರಚಲಿತವಾಗಿದ್ದ ಐತಿಹ್ಯವೊಂದು ಆಧಾರವಾಗಿತ್ತೆಂಬುದರಲ್ಲಿ ಅನುಮಾನವಿಲ್ಲ. ಪದ್ಯ ಮತ್ತು ಕಾವ್ಯಮಯ ಗದ್ಯದ ಮಿಶ್ರಶೈಲಿಯಲ್ಲಿ ಇದನ್ನು ರಚಿಸಲಾಗಿದೆ. ಇದನ್ನು ಥಾಯ್ ಭಾಷೆಯಲ್ಲಿ ಲಿತಿತ್ ಎಂದು ಕರೆಯಲಾಗಿದೆ. ಬಳಕೆ ತಪ್ಪಿಹೋಗಿರುವ ಶಬ್ದಗಳು ಮತ್ತು ಅಭಿವ್ಯಕ್ತಿಗಳು ಇದರಲ್ಲಿ ಇವೆಯಾದರೂ ಭಾಷೆಯ ಅಭಿವ್ಯಕ್ತಿ ಶಕ್ತಿ ನಿರ್ದಿಷ್ಟವಾಗಿದೆ. ಅದರ ಅತ್ಯುನ್ನತ ಸಾಹಿತ್ಯಿಕ ಮೌಲ್ಯದ ಜೊತೆಗೆ, ಹಿಂದಿನ ಕಾಲದ ಥಾಯ್ ಜನಾಂಗದ ನಂಬಿಕೆಗಳು, ಆಚಾರವಿಚಾರಗಳು ಮತ್ತು ರೀತಿನೀತಿಗಳ ಬಗೆಗಿನ ಅನೇಕ ಅಂಶಗಳು ಇಲ್ಲಿ ಇಣುಕುತ್ತವೆ. ಕೃತಿಯ ಕೊನೆಯಲ್ಲಿ ಬರುವ ಕೆಲವು ಪದ್ಯಗಳಲ್ಲಿ ಕೃತಿಕಾರ ತಾನು ಮಹಾರಾಜನೆಂದು ಹೇಳಿಕೊಳ್ಳುತ್ತಾನಾದರೂ ದುರದೃಷ್ಟವಶಾತ್ ಮುಂದಿನ ಪದ್ಯದಲ್ಲಿ ಈ ಕೃತಿಯ ಕರ್ತೃ ಎಂದು ಹೇಳಲಾಗಿದೆ. ಕೃತಿರಚನೆಯ ಕಾಲವನ್ನೇನೂ ಕೊಟ್ಟಿಲ್ಲ. ಈ ಎರಡು ಪದ್ಯಗಳು ಕೃತಿಕಾರನವೇ ಆಗಿರಬಹುದು ಅಥವಾ ಇವು ಇತರರ ರಚನೆಗಳಾಗಿದ್ದು ಬೇರೆ ಬೇರೆ ಕಾಲಗಳಲ್ಲಿ ಪ್ರಕ್ಷೇಪಿತವಾಗಿರಬಹುದು. ಬಹುಶಃ ಯಾರೋ ಒಬ್ಬ ಇದರ ಕರ್ತೃ ರಾಜ ಎಂಬ ಆಶಯವನ್ನುಳ್ಳ ಪದ್ಯವನ್ನು ಪ್ರಕ್ಷೇಪಿಸಿರಬೇಕು. ಅನಂತರ ಇನ್ನೊಬ್ಬ ಹೌದು, ಮಹಾರಾಜನೇ ಈ ಕೃತಿಯ ಲೇಖಕ, ಆದರೆ ಇದನ್ನು ಬರೆದ ಕಾಲದಲ್ಲಿ ಅವನು ಯುವರಾಜನಾಗಿದ್ದ ಎಂಬ ಅರ್ಥದ ಮಾತುಗಳನ್ನು ಸೇರಿಸಿರಬೇಕು. ಹಾಗಿದ್ದರೆ ನಿಜವಾದ ಕರ್ತೃ ಯಾರು? ಇಲ್ಲಿ ಭಿನ್ನಾಭಿಪ್ರಾಯಗಳಿಗೆ ಎಡೆ ಇದೆ. ಕೆಲವರು ರಾಜ ಬೊರೊಮತ್ತೈಲೊಕ್ (ಕ್ರಿ.ಶ. 1463 -1488) ಎಂಬಾತ ಇದರ ಕರ್ತೃ ಎಂದರೆ, ಇತರರು ಇದು ರಾಜ ನರೈ (ಕ್ರಿ.ಶ 1647 - 1688) ಎಂಬುವವನ ಕೃತಿ ಎನ್ನುತ್ತಾರೆ. ಥಾಯ್ ಭಾಷೆಯ ಮಹಾಕೃತಿಗಳಲ್ಲಿ ಫ್ರ ಲವ್ ಒಂದಾಗಿದೆ ಹಾಗೂ ಸಾಹಿತ್ಯವಿದ್ವಾಂಸರಲ್ಲಿಯೂ ಅದು ಜನಪ್ರಿಯವಾಗಿದೆ. ಹೆಚ್ಚಿನ ಅಧ್ಯಯನದ ಶಾಲೆಗಳಲ್ಲಿ ಅದನ್ನು ಸಾಹಿತ್ಯಿಕ ಅಧ್ಯಯನದ ಪುಠ್ಯಪುಸ್ತಕವನ್ನಾಗಿ ಬಳಸಲಾಗುತ್ತಿದೆ. ಸುಮಾರು ನಲವತ್ತು ವರ್ಷಗಳ ಹಿಂದೆ ಅದನ್ನು ನಾಟಕರೂಪದಲ್ಲಿ ಮುಂದಿರಿಸಿದಂದಿನಿಂದ ಫ್ರ ಲವ್‍ನ ಕಥೆ ಜನಸಾಮಾನ್ಯರಿಗೂ ಚಿರಪರಿಚಿತವಾಗಿ ಬಿಟ್ಟಿದೆ. ಆಗಿಂದಾಗ್ಗೆ ಸಂಗೀತನಾಟಕ ರೂಪದಲ್ಲಿ ಅದನ್ನು ಅಭಿನಯಿಸಲಾಗುತ್ತಿದೆ. ಅದರ ಅನೇಕ ಹಾಡುಗಳನ್ನು ಜನ ಹಾಡುತ್ತಾರೆ; ರೇಡಿಯೋನಲ್ಲಿಯೂ ಅದು ಕೇಳಿಬರುತ್ತಿದೆ. ಪ್ರೇಮ್‍ಛಯ ಎಂಬುವರು 1936ರಲ್ಲಿ ಅದರ ಮುಖ್ಯ ಕಥೆಯನ್ನು ಮ್ಯಾಜಿಕ್‍ಲೋಟಸ್ ಎಂಬ ಹೆಸರಿನಿಂದ ಇಂಗ್ಲಿಷಿಗೆ ಭಾಷಾಂತರಿಸಿದರು.

ಫ್ರ ಸಮುತ್ಥಖೊತ್ (ಅಥವಾ ಸಂಸ್ಕøತದಲ್ಲಿ ಹೇಳಬೇಕೆಂದರೆ ಸಮುದ್ರ ಘೋಷ) ಎಂಬುದು ಸಂಸ್ಕøತದ ಒಂದು ಛಂದೋವಿಧಾನದಲ್ಲಿ ರಚಿತವಾಗಿದೆ. ಫ್ರ ಸಮುತ್ಥಖೊತ್ ಎಂಬುದು ನಾಯಕನ ಹೆಸರು. ಥೈಲೆಂಡಿನಲ್ಲಿ ಪ್ರಚಲಿತವಾಗಿರುವ ಶಾಸ್ತ್ರೇತರ ಬೌದ್ಧಗ್ರಂಥವಾದ ಪಞÁಸ ಜಾತಕದಲ್ಲಿನ ಐವತ್ತು ಕಥೆಗಳಲ್ಲಿ ಒಂದು ಇದಕ್ಕೆ ಆಕರವಾಗಿದೆ. ಅದರಲ್ಲಿನ ಬಹುಪಾಲು ಕಥೆಗಳು ಥಾಯ್ ಜನಪದ ಕಥೆಗಳೇ ಆಗಿವೆ. ಸಮುತ್ಥಖೊತ್‍ನ ಕಥೆಯನ್ನು ಇಲ್ಲಿ ಹೇಳಬೇಕಾಗಿಲ್ಲ. ಏಕೆಂದರೆ ಭಾರತದ ಕಥಾಸರಿತ್ಸಾಗರದಲ್ಲಿ ಕಾಣದೊರೆಯುವ ಸಮುದ್ರಘೋಷನ ಕಥೆಯ ರೂಪರೇಷೆಗಳನ್ನೇ ಇದೂ ಅನುಸರಿಸಿದೆ. ಭಾರತೀಯ ಪುರಾಣಗಳಲ್ಲಿ ಕಾಣದೊರೆಯುವ ವಿದ್ಯಾಧರರು ಮತ್ತು ಯಕ್ಷರಂಥ ಅತಿಮಾನುಷ ವ್ಯಕ್ತಿಗಳು ಇಲ್ಲೂ ಬರುತ್ತಾರೆ. ರಾಜ ನರೈನ ಆಸ್ಥಾದಲ್ಲಿದ್ದ ಪ್ರಸಿದ್ಧ ಕವಿಯೊಬ್ಬ ಇದನ್ನು ರಚಿಸಿದ. ಆದರೆ, ಕೃತಿಯನ್ನು ಅವನು ಪೂರ್ಣಗೊಳಿಸಲಿಲ್ಲ. ಸ್ವತಃ ರಾಜ ನರೈ ಈ ಕಾರ್ಯವನ್ನು ಮುಂದುವರಿಸಿದನಾದರೂ ಇದು ಮತ್ತೆ ಅಪೂರ್ಣವಾಗಿಯೇ ಉಳಿಯಿತು. 19ನೆಯ ಶತಮಾನದಲ್ಲಿ ಈ ಶೈಲಿಯ ರಚನೆಯಲ್ಲಿ ಸ್ವತಃ ಖ್ಯಾತಿವೆತ್ತ ಕವಿಯಾಗಿದ್ದ ಹಿರಿಯ ರಾಜಕುಮಾರನೊಬ್ಬ ಯಾವಾಗಲೋ ಇದನ್ನು ಪೂರ್ಣಗೊಳಿಸಿದ. ಫ್ರ ಸಮುತ್ಥಖೊತ್ ಗ್ರಂಥದ ಶೈಲಿ ಪೆಡಸಾಗಿದೆ. ರಚನೆ ಜಟಿಲವಾಗಿದೆ. ಬುದ್ಧಿವಂತರಿಗೂ ಸುಲಭವಾಗಿ ಅರ್ಥವಾಗದಂಥ ಪಾಂಡಿತ್ಯಪ್ರದರ್ಶನದ ಪ್ರತೀಕವಾಗಿರುವ ಶಬ್ದಗಳೂ ಸಂಸ್ಕøತ ಶಬ್ದಗಳೂ ತುಂಬಿಕೊಂಡಿವೆ. ಅದು ಸಹಜವಾಗಿರುವುದಕ್ಕಿಂತ ಹೆಚ್ಚಾಗಿ ಕೃತಕವಾಗಿದೆ. ಕೇವಲ ತನ್ನ ವರ್ಗದ ಒಂದು ವಿಶಿಷ್ಟ ಕೃತಿಯಾಗಿ, ಅನೇಕ ಬಗೆಯ ಭಾರತೀಯ ಛಂದಸ್ಸುಗಳಲ್ಲಿ ಆಳವಟ್ಟಿರುವ ಸುಂದರ ಲಯಬದ್ಧ ಶಬ್ದಗಳಿಂದಾಗಿ, ಅದು ಉಳಿದುಕೊಂಡು ಬಂದಿದೆ. ಹೃದಯಕ್ಕಿಂತ ಹೆಚ್ಚಾಗಿ ಬುದ್ಧಿಯನ್ನು ರಂಜಿಸುವ ಪದವಿನ್ಯಾಸದ ಚಮತ್ಕಾರವೇ ಇಲ್ಲಿ ಮೇಲುಗೈಯನ್ನು ಪಡೆದಿದೆ.

ಮಹಛತ್ ಖಮ್‍ಥೆತ್ (ಪಾಲಿಯಲ್ಲಿ ಮಹಛತ್ ಅಥವಾ ಮಹಾ ಜತಿ) ಬುದ್ಧತ್ವ ಪ್ರಾಪ್ತಿಗೆ ಮೊದಲಿನ ಅಂತಿಮಪೂರ್ವಭವದ ಬುದ್ಧನ ಕಥೆಯನ್ನೊಳಗೊಂಡಿದೆ. ಈ ಭವವನ್ನು ವೆಸ್ಸಂತರ ಜಾತಕ ಎಂದು ಕರೆಯಲಾಗಿದೆ. ಇದರ ಕಥೆ ನಾಡಿನ ಆದ್ಯಂತ ತುಂಬ ಪ್ರಚಲಿತವಾಗಿದೆ. ಥಾಯ್ ಭಾಷೆಯಲ್ಲಿ ಇದರ ಅನೇಕ ಆವೃತ್ತಿಗಳಿವೆ ಹಾಗೂ ಅನೇಕ ರೂಪಗಳಲ್ಲಿ ಇದನ್ನು ರಚಿಸಲಾಗಿದೆ. ತಜ್ಞರ ಸಮಿತಿ ಆರಿಸಿದ ಶೈಲಿಯ ರಚನೆಯೆಂದರೆ ಖಮ್‍ಥೆತ್ ಅಥವಾ ಬೋಧನೆಯಲ್ಲಿ ಬಳಸುವ ಭಾಷೆಯಲ್ಲಿನ ರಚನೆ, ಇದು ಹದಿಮೂರು ಅಧ್ಯಾಯಗಳನ್ನು ಒಳಗೊಂಡಿದೆ. ಹೀಗಾಗಿ, ಇದು ಸಾಕಷ್ಟು ಗಾತ್ರದ್ದಾಗಿದೆ. ಬೇರೆ ಬೇರೆ ಕಾಲದಲ್ಲಿ ಅನೇಕ ಕವಿಗಳು ಇದರ ಒಂದು ಅಥವಾ ಹೆಚ್ಚು ಅಧ್ಯಾಯಗಳನ್ನು ಬರೆದು ಸೇರಿಸಿದ್ದಾರೆ. ಪ್ರತಿ ಅಧ್ಯಾಯದಲ್ಲಿನ ಅತ್ಯುತ್ತಮ ಭಾಗಗಳನ್ನು ಆಯ್ದು, ಇಡೀ ಕಥೆಯಾಗಿ ಜೋಡಿಸಲಾಗಿದೆ. ರಚನೆ ವಿಸ್ತಾರವಾದ ಗದ್ಯ ಗೀತದಂತಿದ್ದು, ಸುಂದರವಾದ ಹಾಗೂ ಭಾವಪೂರ್ಣವಾದ ಶಬ್ದಗಳಿಂದ ತುಂಬಿದೆ. ಪ್ರೇಮ, ಕರುಣೆ, ಹಾಸ್ಯ ಮತ್ತು ವರ್ಣನಾತ್ಮಕ ದೃಶ್ಯಗಳು ಕಥೆಯಲ್ಲಿ ಕಾಣದೊರೆಯುತ್ತವೆ. ಆದ್ದರಿಂದ ಇವುಗಳ ಅಭಿವ್ಯಕ್ತಿಯಲ್ಲಿ ಕವಿಗಳು ತಮ್ಮ ಪ್ರತಿಭೆಯನ್ನು ಮೆರೆಯಲವಕಾಶವೇರ್ಪಟ್ಟಿದೆ. ಇದು ಥಾಯ್ ಜನಾಂಗದ ಪ್ರತಿಯೊಬ್ಬನಿಗೂ ಪ್ರಿಯವಾಗಿರುವ ಕಥೆ, ಶಾಲೆಯಲ್ಲಿ ಪ್ರತಿಯೊಬ್ಬ ತರುಣನೂ ತಪ್ಪದೆ ಓದುವ ಪುಸ್ತಕಗಳಲ್ಲಿ ಇದೂ ಒಂದು. ನಾಡಿನ ಆದ್ಯಂತವಿರುವ ಮಠಗಳ ಉಪದೇಶ ಸಭಾಂಗಣದಲ್ಲಿ ಇದರ ಬೋಧನೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಉತ್ಸವವೊಂದು ನಡೆಯುವುದರಿಂದ ಗ್ರಾಮಾಂತರ ಪ್ರದೇಶಗಳ ಜನತೆಗೂ ಈ ಕಥೆ ಗೊತ್ತಿದೆ. ಥಾಯ್ ಚಿತ್ರಕಲೆಗೂ ಈ ಕಥೆ ಜನಪ್ರಿಯ ವಸ್ತುಗಳನ್ನು ಒದಗಿಸಿದೆ

ಖುನ್ ಛಂಗ್ ಖುನ್ ಫಎನ್: ತುಂಬ ಪ್ರಸಿದ್ಧವಾದ ಹಾಗೂ ಜನಪ್ರಿಯವಾದ ಕೃತಿ. ಇದು ಖುನ್ ಛಂಗ್ ಹಾಗೂ ಖುನ್ ಫಎನ್ ಎಂಬ ತರುಣರು ಮತ್ತು ವನ್ ಥೊಂಗ್ ಎಂಬ ತರುಣಿಯರನ್ನೊಳಗೊಂಡ ಪ್ರೇಮಕಥೆ. ಅವರು ಎಳೆ ವಯಸ್ಸಿನಲ್ಲಿ ಒಂದೇ ಊರಿನಲ್ಲಿ ಜೊತೆಗೂಡಿ ಬೆಳೆದವರು. ಖುನ್ ಛಂಗ್ ಬಕ್ಕತಲೆಯವನಾದರೂ ಶ್ರೀಮಂತ. ಮದುವೆಯಾಗಿತ್ತು. ಊರಿನ ಸಭ್ಯವ್ಯಕ್ತಿಯೆನಿಸಿಕೊಂಡು ನಿಶ್ಚಿಂತೆಯಿಂದ ಬಾಳುತ್ತಿದ್ದ. ಆದರೂ ಹೆಂಡತಿ ಸತ್ತ ಕೂಡಲೇ ಅವನ ಕಣ್ಣು ವನ್ ಥೊಂಗಳ ಮೇಲೆ ಬಿತ್ತು. ಬಾಲ್ಯದಲ್ಲಿ ಆಟದ ಸಂಗಾತಿಯಾಗಿದ್ದ ವನ್ ಥೊಂಗ್ ಇಷ್ಟು ಹೊತ್ತಿಗೆ ಸುಂದರ ಯುವತಿಯಾಗಿ ಬೆಳೆದು ನಿಂತಿದ್ದಳು. ಐಶ್ವರ್ಯವಂತನಾಗಿದ್ದರೂ ಅವನನ್ನು ವನ್ ಥೊಂಗ್ ಪ್ರೀತಿಸಲಿಲ್ಲ. ಅವನ ಬಕ್ಕತಲೆ ಹಾಗೂ ಅರಸಿಕತೆ ಅವಳಿಗೆ ಹೇಸಿಕೆಯನ್ನು ಉಂಟುಮಾಡುತ್ತಿದ್ದವು. ತನ್ನ ಬಾಲ್ಯದ ಇನ್ನೊಬ್ಬ ಒಡನಾಡಿಯಾಗಿದ್ದಂಥ ಖುನ್ ಫಎನ್ನನನ್ನು ಆಕೆ ಪ್ರೀತಿಸಿದಳು. ಆತ ರಸಿಕನೂ ಪ್ರೇಮ ಹಾಗೂ ಯುದ್ಧತಂತ್ರಗಳಲ್ಲಿ ಅತ್ಯಂತ ಕುಶಲನೂ ಆಗಿದ್ದ. ಆದರೆ ಆತ ಬಡವ. ತನ್ನ ತಾಯಿಯೊಂದಿಗೆ ತಾನು ಹುಟ್ಟಿ ಬೆಳೆದಿದ್ದ ಹಳ್ಳಿಯನ್ನು ಬಿಟ್ಟು ಹೊರಟುಹೋಗಿದ್ದವನು ತರುಣನಾದ ಮೇಲೆ ಮತ್ತೆ ಅಲ್ಲಿಗೇ ಹಿಂದಿರುಗಿದ್ದ. ಆಗಲೇ ಅವನು ವನ್ ಥೊಂಗಳನ್ನು ಭೇಟಿಯಾದದ್ದು. ಪ್ರೇಮ ಬೆಳೆಯುವವರೆಗೂ ಅವರಿಗೆ ಪರಸ್ಪರ ಗುರುತು ಹತ್ತಿರಲಿಲ್ಲ. ಪ್ರಣಯದ ವಾತಾವರಣದಲ್ಲೇ ಮುಂದೆ ಇಬ್ಬರೂ ಮದುವೆಯಾದರು. ಇದು ಖುನ್ ಛಂಗ್‍ನಿಗೆ ಸಂಕಟವನ್ನುಂಟಮಾಡಿತು. ಕೆಲಕಾಲಾನಂತರ ದಂಗೆಯೊಂದು ಪ್ರಾರಂಭವಾದಾಗ, ಅದನ್ನು ಮೆಟ್ಟಿ ಹಾಕುವಂತೆ ಆದೇಶ, ನೀಡಿ, ರಾಜ ಖುನ್ ಫಎನ್ನನನ್ನು ಕಳುಹಿಸಿದ. ತುಂಬ ದುಃಖದಿಂದಲೂ ಕಷ್ಟದಿಂದಲೂ ಆತ ತನ್ನ ತರುಣ ಪತ್ನಿಯನ್ನು ಆಗಲಿ ಯುದ್ಧಕ್ಷೇತ್ರಕ್ಕೆ ಹೋದನಲ್ಲದೆ ಹೋಗುವಾಗ ತನ್ನ ಅತ್ತೆಯ ಬಳಿ ಹೆಂಡತಿಯನ್ನು ಬಿಟ್ಟುಹೋದ. ಹೋದವನು ತನ್ನ ಕಾರ್ಯದಲ್ಲಿ ಯಶಸ್ವಿಯಾಗಿ ಹಿಂದಿರುಗಿ ರಾಜನಿಂದ ಮರ್ಯಾದಿತನಾದ. ಬರುವಾಗ ಆತ ತನ್ನ ಜೊತೆಯಲ್ಲಿ ಇನ್ನೊಬ್ಬ ಪತ್ನಿಯನ್ನು ಕರೆದುಕೊಂಡು ಬಂದಿದ್ದ. ಆದರೆ, ಊರಿಗೆ ಹಿಂದಿರುಗಿದಾಗ ಆತ ತನ್ನ ಮನೆಯಿದ್ದ ಭಾಗದಲ್ಲಿ ಬೇರೊಂದು ಹೊಸ ಮನೆ ಎದ್ದಿರುವುದನ್ನು ಕಂಡ. ತನ್ನ ಪತಿ ಯುದ್ಧದಲ್ಲಿ ಸತ್ತನೆಂಬ ಸುಳ್ಳು ಸುದ್ದಿಯನ್ನು ನಿಜವೆಂದು ನಂಬಿ, ವನ್ ಥೊಂಗ್ ತನ್ನ ಇಚ್ಛೆಗೆ ವಿರುದ್ಧವಾಗಿ ಕೆಲವೇ ದಿನಗಳಲ್ಲಿ ಖುನ್ ಛಂಗನನ್ನು ಮದುವೆಯಾಗಲಿದ್ದಳು. ಇದು ಖುನ್ ಛಂಗ್ ಹೂಡಿದ್ದ ತಂತ್ರವಾಗಿತ್ತು. ವನ್ ಥೊಂಗ್ ಮತ್ತು ಖುನ್ ಫಎನ್ನನ ಎರಡನೆಯ ಹೆಂಡತಿಯರ ಮಧ್ಯೆ ಅಸೂಯೆಯ ಕಲಹ ಉಂಟಾಯಿತು. ಖುನ್ ಫಎನ್ ಜಗಳವನ್ನು ತಪ್ಪಿಸಲಾರದೆ ಹೋದ; ವನ್ ಥೊಂಗಳ ಬಗ್ಗೆ ಕೋಪವನ್ನೂ ತೋರಿದ. ಹೀಗಾಗಿ ಒಂದು ದಿನ ಅವನು ಊರುಬಿಟ್ಟು ಹೋದ. ತಾನಿನ್ನೂ ಖುನ್ ಫಎನ್ನನ ಪತ್ನಿಯೇ ಆಗಿದ್ದೇನೆಂದು ಅವಳು ಪ್ರಬಲವಾಗಿ ವಿರೋಧಿಸಿದರೂ ಕೇಳದೆ ಖುನ್ ಛಂಗ್ ಮಾರನೆಯ ದಿನವೇ ಅವಳನ್ನು ಮದುವೆಯಾದ. ಅದಾದ ಮರುದಿವಸವೇ ಖುನ್ ಫಎನ್ ತನ್ನ ಪತ್ನಿಯನ್ನು ತನಗೆ ಹಿಂದಿರುಗಿಸಬೇಕೆಂದು ಪಟ್ಟು ಹಿಡಿದ. ಇದರಿಂದ ಅನೇಕ ತೊಡಕುಗಳು ಉಂಟಾದವು. ಕೊನೆಯಲ್ಲಿ ಖುನ್ ಫಎನ್ ತನ್ನ ಬೇಡಿಕೆಯನ್ನು ಕೈಬಿಟ್ಟು ಆ ಜಾಗದಿಂದ ಹೊರಟುಬಿಟ್ಟ. ಖುನ್ ಛಂಗ್ ಒಳ್ಳೆಯ ಗಂಡನಾಗಿದ್ದ. ವನ್ ಥೊಂಗಳು ಅವನನ್ನು ಅಷ್ಟೇ ಪ್ರೀತಿಸುತ್ತಿದ್ದಳು. ಅದರೆ ಅವಳ ಹೃದಯದಲ್ಲಿ ಖುನ್ ಫಯೆನ್ನನ ಬಗ್ಗೆ ಪ್ರೀತಿ ಮತ್ತು ಮೆಚ್ಚಿಕೆಯ ಭಾವನೆಗಳು ಉಳಿದೇ ಇದ್ದುವು. ಈ ಮೂರು ಬಗೆಯ ಪಾತ್ರಗಳ ಸಾಹಸಕಾರ್ಯಗಳಿಂದಾಗಿ ಕಥಾನಕ ಸಂಕೀರ್ಣಗೊಳ್ಳುತ್ತದೆ. ಪ್ರೇಮದ ಬಗ್ಗೆ ಅವಳು ಅಸ್ಥಿರಳಾಗಿದ್ದಳೆಂಬ ಕಾರಣಕ್ಕಾಗಿ ಅವಳನ್ನು ಶಿಕ್ಷಿಸುತ್ತಾರೆ. ಪ್ರಾಯದ ಉತ್ತಮ ದಶೆಯಲ್ಲಿದ್ದ ಅವಳು ಈ ಕಾರಣಕ್ಕಾಗಿ ಶಿರಶ್ಛೇದನ ಶಿಕ್ಷೆಗೆ ಗುರಿಯಾಗುತ್ತಾಳೆ. ಏಕೆಂದರೆ ಯಾರನ್ನು ಪ್ರೀತಿಸುತ್ತೀಯೆ ಎಂಬ ರಾಜನ ಪ್ರಶ್ನೆಗೆ ಅವಳು ನಿಶ್ಚಿತವಾದ ಉತ್ತರವನ್ನು ಕೊಡಲಾರದೆ ಸೋಲುತ್ತಾಳೆ. ಕಥೆ ಇಲ್ಲಿಯೇ ಕೊನೆಗೊಳ್ಳುವುದಿಲ್ಲ; ವನ್ ಥೊಂಗಳ ಸಾವಿನೊಂದಿಗೆ ಅದು ತನ್ನ ತುತ್ತ ತುದಿಯನ್ನು ತಲಪುತ್ತದೆ.

ತಾಳ ಹಾಕುವ ಸಲುವಾಗಿ ಉಪಯೊಗಿಸಲಾಗುವ ಗಟ್ಟಿ ಮರದಿಂದ ಮಾಡಿದ, ಎರಡು ಜೊತೆ ಚಿಟಿಕೆಗಳೊಡನೆ ಹಾಡಲು ಅನುಕೂಲವಾಗುವಂಥ ಲಾವಣಿ ಶೈಲಿಯಲ್ಲಿ ಖುನ್ ಛಂಗ್ ಖುನ್ ಫಎನ್ ಕಥೆಯನ್ನು ರಚಿಸಲಾಗಿದೆ. ಬಹುಶಃ ನಿಜ ಜೀವನದಿಂದಲೇ ಕಥೆಯ ಮುಖ್ಯಾಂಶಗಳನ್ನು ಎತ್ತಿಕೊಂಡಿರಬೇಕು. ಈ ಕಥೆಯಲ್ಲಿ ಬರುವ ರಾಜ ಸುಮಾರು ಎರಡು ಶತಮಾನಗಳ ಹಿಂದೆ, ಉತ್ತರ ಅಯೂದಿಯಾ ಕಾಲದಲ್ಲಿದ್ದ ಥಾಯ್ ರಾಜರುಗಳಲ್ಲಿ ಒಬ್ಬನಾಗಿದ್ದಾನೆ. ಖುನ್ ಫಎನ್ ಅವನ ಸೈನಿಕರಲ್ಲಿ ಒಬ್ಬನಾಗಿರಬಹುದು. ಈ ವಾಸ್ತವ ಕಥೆಯನ್ನು ಕಾಲಕಾಲಕ್ಕೆ ಕವಿಗಳು ವಿಸ್ತರಿಸುತ್ತ ಬಂದಿದ್ದು ಕೊನೆಗೆ ಅದು ಇಂಥ ದೀರ್ಘ ಪ್ರಣಯದ ಕಥೆಯಾಗಿ ಪರಿಣಮಿಸಿದೆ. ಹೀಗಾಗಿ, ಕಥೆಯಲ್ಲಿನ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಅನೇಕ ಆವೃತ್ತಿಗಳು ಕಾಣದೊರೆಯುತ್ತವೆ. ಇವನ್ನು ಸಂಗ್ರಹಿಸಿ, ಪುನಃ, ಸಂಪಾದಿಸಿ ಇಂದಿನ ಸ್ವರೂಪದಲ್ಲಿ ಪ್ರಕಟಿಸಿದ್ದು ರಾಯಲ್ ಇನ್ಸ್‍ಟಿಟ್ಯೂಟ್. ದೊರೆ ಇಮ್ಮಡಿ ರಾಮ ಹಾಗೂ ಸುನ್‍ಥೊರ್ನ್ ಭು ಎಂಬ ಥಾಯ್ ಭಾಷೆಯ ಶ್ರೇಷ್ಠ ಕವಿಗಳು ಅನೇಕ ಪ್ರಕರಣಗಳನ್ನು ರಚಿಸಿದರು. ಜನರ ನಿತ್ಯದ ಆಡುಮಾತಿನಶೈಲಿಯಲ್ಲಿ ರಚಿತವಾಗಿರುವುದರಿಂದ ಇದು ಜನಪ್ರಿಯವಾಗಿದೆ. ಕಥೆಯಲ್ಲಿ ಪ್ರೀತಿ ಕರುಣೆ ಮತ್ತು ಅಲ್ಲಲ್ಲಿ ಹಾಸ್ಯ ತುಂಬಿಕೊಂಡಿವೆ; ಕಥೆಯ ಉದ್ದಕ್ಕೂ ಥಾಯ್ ಜನಾಂಗದ ನಂಬಿಕೆಗಳು, ಸಾಮಾಜಿಕ ಸಂಪ್ರದಾಯಗಳು. ಅಭ್ಯಾಸಗಳು ಹಾಗೂ ರೀತಿನೀತಿಗಳಿಗೆ ಸಂಬಂಧಿಸಿದ ಮಾಹಿತಿ ಹೇರಳವಾಗಿ ಲಭ್ಯವಾಗುತ್ತದೆ.

ಇನಒ ಎಂಬುದು ಸುಪ್ರಸಿದ್ಧವಾದ ಪಂಜಿಯ ಕಥಾಚಕ್ರದಿಂದ ಆಯ್ದುಕೊಂಡಿರುವ ಕಥೆ. ಪಂಜಿ ಜಾವಾದ್ವೀಪದ ಪರಾಕ್ರಮಿ ಹಾಗೂ ಮಜಪಹಿತ್ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವ ಮುನ್ನ ರಾಜನಾಗಿದ್ದವ. ಮಲಯ ಕುಲಕ್ಕೆ ಸೇರಿದ ಇಬ್ಬರು ಚೇಟಿಕೆಯರು ಉತ್ತರ ಅಯುಧ್ಯ ಕಾಲದ ಇಬ್ಬರ ರಾಜಕುಮಾರಿಯರಿಗೆ ಈ ಕಥೆಯನ್ನು ಹೇಳಿದರೆಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ. ಈ ಇಬ್ಬರು ರಾಜಕುಮಾರಿಯರು ಮೊದಲ ಈ ಬಾರಿಗೆ ಕಥೆಯನ್ನು ಎರಡು ಬೇರೆ ಬೇರೆ ಆವೃತ್ತಿಗಳಲ್ಲಿ ಪದ್ಯರೂಪದಲ್ಲಿ ರಚಿಸಿದರೆಂದೂ ಕಥಾನಾಯಕ ಒಬ್ಬನೇ ಆಗಿದ್ದರೂ ಈ ಆವೃತ್ತಿಗಳಲ್ಲಿನ ಕಥೆ ಭಿನ್ನವಾಗಿತ್ತೆಂದೂ ಹೇಳಲಾಗಿದೆ. ಇವುಗಳಲ್ಲಿ ಒಂದು ಆವೃತ್ತಿಯ ಕಥೆ ಮಾತ್ರ ಉಳಿದುಕೊಂಡು ಬಂದಿದೆ. ನಾಟಕ ಪ್ರದರ್ಶನಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅದನ್ನು ಅನಂತರದಲ್ಲಿ ಪುಸ್ತಕ ರೂಪದಲ್ಲಿ ಹೊರತರಲಾಯಿತು. ದೊರೆ ಇಮ್ಮಡಿ ರಾಮ ರಚಿಸಿದ ಆವೃತ್ತಿಗೆ ಈಗ ಇನಒ ಎಂಬ ಹೆಸರಿದೆ. ಕಲಾತ್ಮಕ ಅಭಿವ್ಯಕ್ತಿಯ ದೃಷ್ಟಿಯಿಂದ ಅದು ಸುಂದರವಾಗಿದೆ. ಹಾಗೂ ಅದರ ಭಾಷೆ ಸುಸಂಸ್ಕøತವಾಗಿದೆ. ಥಾಯ್ ಸಾಹಿತ್ಯದ ಯಾವ ವಿದ್ಯಾರ್ಥಿಯೂ ಇದನ್ನು ಓದದೆ ಇರಬಾರದು.

ಹುಅ ಛೈ ನಕ್ರೊಪ್ ಎಂಬುದು ದೊರೆ ವಜಿರವುಧ್ ರಚಿಸಿರುವ ಆಧುನಿಕ ನಾಟಕ. ಯೋಧನ ಹೃದಯ ಎಂಬುದು ಈ ಶೀರ್ಷಿಕೆಯ ಅರ್ಥ. ಈ ಬಗೆಯ ರಚನೆಯಲ್ಲಿ ದೊರೆ ವಜಿರವುಧ್ ಒಬ್ಬ ಆದ್ಯ ಪ್ರವರ್ತಕನಾಗಿದ್ದ. ಸುಪ್ರಸಿದ್ಧ ಇಂಗ್ಲಿಷ್ ಮತ್ತು ಫ್ರೆಂಚ್ ನಾಟಕಗಳನ್ನು ಥಾಯ್ ಭಾಷೆಗೆ ಅಳವಡಿಸಿಕೊಂಡುದರ ಹಾಗೂ ಭಾಷಾಂತರಿಸಿಕೊಂಡುದರ ಜೊತೆಗೆ ಈತ ಅನೇಕ ಸ್ವತಂತ್ರ ಥಾಯ್ ನಾಟಕಗಳನ್ನೂ ರಚಿಸಿದ. ಆಗಿಂದಾಗ್ಗೆ ಈ ಎಲ್ಲ ನಾಟಕಗಳನ್ನೂ ಅಭಿನಯಿಸಲಾಗಿದೆ. ಯೋಧನ ಹೃದಯ ಎಂಬುದು ಈ ರಾಜಕವಿಯ ಅತ್ಯತ್ತಮ ರಚನೆಗಳಲ್ಲಿ ಒಂದಾಗಿದೆ. ಕಾಲ್ಪನಿಕ ಶತ್ರುವೊಬ್ಬ ನಾಡಿನ ಮೇಲೆ ಆಕ್ರಮಣ ನಡೆಸುವುದನ್ನು ವಸ್ತುವಾಗುಳ್ಳ ಈ ನಾಟಕ ನೆರವು ಬರುವವರೆಗೆ ಛಲದಿಂದ ಹೋರಾಡಿ ಶತ್ರುಗಳ ಕೈವಶವಾಗದಂತೆ ತನ್ನ ಭಾವಿ ಮಾವನ ಪ್ರಾಂತ್ಯವನ್ನು ರಕ್ಷಿಸುವುದರ ಮೂಲಕ ಆತನನ್ನು ತನ್ನ ಪರವಾಗಿಸಿಕೊಳ್ಳುವ ನಾಯಕನ ಪ್ರಯತ್ನದಿಂದ ಸುಖಾಂತವಾಗಿದೆ.

ಸಮ್ ಕೊಕ್ (ಮೂರು ರಾಜ್ಯಗಳು) ಎಂಬುದು ಚೀನಿ ಐತಿಹಾಸಿಕ ಪ್ರಣಯ ಕಾವ್ಯವೊಂದರ ಅನುವಾದ. ಸಮ್‍ಕೊಕ್‍ನ ಶ್ರೇಷ್ಠತೆ ಅಡಗಿರುವುದು ಅದರ ಶಬ್ಧಶಃ ಭಾಷಾಂತರದಲಲ್ಲ; ಅದರ ಗದ್ಯಶೈಲಿ ಥಾಯ್ ಭಾಷೆಯ ಅತ್ಯತ್ತಮ ಮಾದರಿಗಳಲ್ಲೊಂದು ಎಂದು ಪರಿಗಣಿತವಾಗುವಷ್ಟರ ಮಟ್ಟಿಗೆ, ಕಲಾತ್ಮಕವಾಗಿ ಅಳವಡಿಕೆಗೊಂಡಿರುವುದರಲ್ಲಿ, ಏಕೆಂದರೆ, ಅದು ಗದ್ಯ ಎಂಬುದಕ್ಕಿಂತ ಹೆಚ್ಚಾಗಿ ಗದ್ಯಗೀತದಂತೆ ಓದಿಸಿಕೊಳ್ಳುತ್ತದೆ. ಪೂರ್ವ ಬಾಂಕಾಕ್ ಕಾಲದ ಪ್ರಸಿದ್ಧ ಕವಿಯಾದ ಛಒ ಫ್ಯ ಫ್ರ ಖ್ಲಂಗ್ ಎಂಬಾತ ಇದರ ಭಾಷಾಂತರಕಾರ. 

ಫ್ರ ರಾಜಪಿಥಿ ಸಿಪ್‍ಸೊಂಗ್ ದುಅನ್ ಅಂದರೆ ವರ್ಷದ ಹನ್ನೆರಡು ತಿಂಗಳುಗಳಲ್ಲಿ ನಡೆಸುವ ಅರಮನೆಯ ಸಾಂಪ್ರದಾಯಿಕ ನಡೆವಳಿಗಳು ಎಂದು ಅರ್ಥ. ಇದು ಥಾಯ್ ರಾಜ ಮನೆತನ ಆಚಾರ ವಿಚಾರಗಳ ಬಗೆಗಿನ ಉದ್ಗ್ರಂಥ. ಕೆಲವರನ್ನು ಬಿಟ್ಟರೆ, ಈ ಆಚಾರ ವಿಚಾರಗಳು ಜನರಿಗೆಲ್ಲ ಸಂಪೂರ್ಣವಾಗಿ ತಿಳಿದಿಲ್ಲ. ಅಥವಾ ಅವನ್ನು ಸಮಗ್ರವಾಗಿ ಅವರೆಂದೂ ನೋಡುವುದೂ ಇಲ್ಲ. ನಿರರ್ಗಳ ಶೈಲಿಯನ್ನು ಬಹುಶ್ರುತ e್ಞÁನವನ್ನೂ ಹೊಂದಿದ್ದ ದೊರೆ ಛುಲಲೊಂಗ್ ಕೊರ್ನ್ ಈ ಪ್ರಸಿದ್ಧ ಪುಸ್ತಕವನ್ನು ರಚಿಸಿದ. ಅವನು ತೀರಿಕೊಂಡಿದ್ದರಿಂದ ಇದು ಆ ಹೊತ್ತಿಗಾಗಲೇ ಹಲವು ನೂರ ಪುಟಗಳವರೆಗೆ ವಿಸ್ತರಿಸಿಕೊಂಡಿದ್ದರೂ ಅಪೂರ್ಣವಾಗಿಯೇ ಉಳಿಯಿತು. ಥಾಯ್ ಸಂಸ್ಕøತಿಯ ಒಂದು ಅತ್ಯಂತ ಪ್ರಮುಖ ಮುಖವನ್ನು ವಿವರಿಸುವ ಪುಸ್ತಕ ಇದಾಗಿರುವುದರಿಂದ ಗತಕಾಲದ ಬಗೆಗಿನ ಅರಿವಿಗಾಗಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಈ ಪುಸ್ತಕವನ್ನು ಅಭ್ಯಸಿಸುತ್ತಾರೆ, ಪರಿಶೀಲಿಸುತ್ತಾರೆ. ಸಾಮಾನ್ಯ ಓದುಗನನ್ನು ದೃಷ್ಟಿಯಲ್ಲಿರಿಸಿಕೊಂಡು ಇದನ್ನು ರಚಿಸಿರುವುದರಿಂದ ಇದರ ಶೈಲಿ ಸ್ಪಷ್ಟವೂ ನಿರ್ದಿಷ್ಟವೂ ಅಗಿದೆ.

ಈ ಮೇಲಿನ ಪಟ್ಟಿಗೆ ಪ್ರ ಅಭೈ ಮನಿ ಮತ್ತು ರಾಮಕಿಯೆನ್‍ಗಳನ್ನು ಸೇರಿಸಬಹುದು. 

ಫ್ರ ಅಭೈ ಮನಿ ಎಂಬುದು ಪ್ರಸಿದ್ಧ ಕವಿಯಾದ ಸುನ್‍ಥೊರ್ನ್ ಭು ರಚಿಸಿದ ಪ್ರಣಯ ಕಥೆ. ಪ್ರೇಮ, ಸಂಚು ಹಾಗೂ ಸಾಹಸಗಳ ಸುತ್ತ ಹೆಣೆದ ಕಾಲ್ಪನಿಕ ಕಥೆಯಿದು.

ರಾಮಕಿಯೆನ್ ಎಂಬುದು ಭಾರತೀಯ ಮಹಾಕಾವ್ಯವಾದ ರಾಮಾಯಣದ ಥಾಯ್ ಭಾಷೆಯ ಆವೃತ್ತಿ. ವಾಲ್ಮೀಕಿ ರಾಮಾಯಣದಿಂದ ಇದು ಬಹುತೇಕವಾಗಿ ಭಿನ್ನವಾಗಿದೆ ಎಂಬುದೂ ಅಲ್ಲಲ್ಲಿ ತಮಿಳು, ಕಾಶ್ಮೀರಿ, ಬಂಗಾಳಿ, ಮಲಯ್ ಮತ್ತು ಜಾವಾ ಭಾಷೆಯ ರಾಮಾಯಣಗಳನ್ನು ಹೋಲುತ್ತದೆಂಬುದೂ ಅತ್ಯಂತ ಕುತೂಹಲಕರವಾದ ಸಂಗತಿಯಾಗಿದೆ. ಇದು ಥಾಯ್ ಭಾಷೆಯಲ್ಲಿನ ಅತ್ಯಂತ ದೀರ್ಘ ಕಥೆಯಾಗಿದ್ದು, ಅನೇಕ ಸಂಪುಟಗಳವರೆಗೆ ವಿಸ್ತರಿಸಿಕೊಂಡಿದೆ.

ಒಟ್ಟಿನಲ್ಲಿ ಥಾಯ್ ಸಾಹಿತ್ಯ, ಕಲೆ ಮತ್ತು ಸಂಸ್ಕøತಿಗಳನ್ನು ಅರಿಯಬಯಸುವವರಿಗೆ ಇವುಗಳಲ್ಲಿ ಅನೇಕ ಪುಸ್ತಕಗಳ ಪರಿಚಯ ಅಗತ್ಯವಾಗುತ್ತದೆ. ಏಕೆಂದರೆ, ಇವು ಥಾಯ್ ಭಾಷೆಯ ಮಹಾಕೃತಿಗಳು; ಇವುಗಳಲ್ಲಿ ಪ್ರಾಚೀನವಾದುವೂ ಇವೆ, ಆಧುನಿಕವಾದುವೂ ಇವೆ, ಎಲ್ಲ ವರ್ಗಗಳಿಗೆ ಸೇರಿದ ಕೃತಿಗಳೂ ಇವೆ. ಫ್ರ ಸಮುತ್ಥ ಖೊತ್ ಮತ್ತು ಸಮ್‍ಕೊಕ್ - ಇವನ್ನು ಬಿಟ್ಟರೆ, ಥಾಯ್ ಭಾಷೆಯ ರಾಷ್ಟ್ರೀಯ ಪ್ರತಿಭೆಯ ಪ್ರಾತಿನಿಧಿಕ ಕೃತಿಗಳಾಗಿ ಉಳಿದ ಗ್ರಂಥಗಳನ್ನು ಇತರ ಭಾಷೆಗಳಿಗೆ ಅನುವಾದಿಸುವುದು ಅಗತ್ಯ.
(ಸಿ.ಟಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ